ಕನ್ನಡ ಎಂಬುದು ನನ್ನ ಧರ್ಮ, ಬೆಳೆಸುವುದು ನನ್ನ ಕರ್ಮ
- Dindima
- Jun 25, 2021
- 2 min read
ಬೆಂಗಳೂರು ಅಂತಹ ಸುಂದರ ನಗರ ಭಾರತದಲ್ಲಿ ನಿಮಗೆ ಎಲ್ಲೂ ಸಿಗಲ್ಲ. ಯಾಕೆ ಗೊತ್ತಾ ? ಇದೊಂದು ಬಹು ಬಹುಭಾಷಾ ಮತ್ತು ಭಾಷಾ ಸ್ನೇಹಿ ನಗರ. ಮುಂಬೈ ಕೂಡ ಭಾಷಾ ಸ್ನೇಹಿ ನಗರ ಆಗಿದ್ದರೂ ಮರಾಠಿ ಮೊದಲು, ಆನಂತರ ಹಿಂದಿ / ಉರ್ದು, ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ. ಹೈದರಾಬಾದ್ನಲ್ಲೂ ಸಹ ಮುಖ್ಯವಾಗಿ ತೆಲುಗು, ತದ ನಂತರ ಉರ್ದು / ಹಿಂದಿ ಮತ್ತು ಇಂಗ್ಲಿಷ್ ಅನ್ನು ಬಳಸುತ್ತಾರೆ. ಹಾಗೆ ನೋಡಿದರೆ ಬೆಂಗಳೂರು ನಲ್ಲಿ ನಿಮಗೆ ಕನ್ನಡ ಮಾತೋಡೋಕೆ ಸಿಗುವವರೇ ಅಪರೂಪ. ಇಷ್ಟೇ ಅಲ್ಲ ನಮ್ಮ ಕರುನಾಡಿನ ಭಾಷೆಗಳಾದ ಕೊಂಕಣಿ ಮತ್ತು ತುಳು ಸಹ ಇಲ್ಲಿ ಕಾಣ ಸಿಗುವುದಿಲ್ಲ.
ಕನ್ನಡ ಭಾಷಾ ಕಲಿಕೆಯ ಒತ್ತಡ ಎಂಬ ಅಪಸ್ವರ
ವಲಸಿಗರಲ್ಲಿ ಈ ಮೇಲಿನ ಮಾತು ಸಾಕಷ್ಟು ಕೇಳಿ ಬರುವಂಥದ್ದು. ಒತ್ತಡ ಹಾಕಿ ನಮಗೆ ಕನ್ನಡ ಕಲಿಯುವಂತೆ ಮಾಡುತ್ತಿದ್ದಾರೆ ಎಂದು. ಆದರೆ ನಿಜವಾಗಿ ಅಲ್ಲಿ ನಡಿಯುತ್ತಿರುವುದೇನು ಎಂಬುದು ಯಕ್ಷ ಪ್ರಶ್ನೆ.
ಈಗ ಕೆಲವೊಂದು ಅಂಶಗಳನ್ನು ನೋಡೋಣ. ಆಮೇಲೆ ಇದರ ಬಗ್ಗೆ ಕೂಲಂಕುಷವಾಗಿ ತಿಳಿಯೋಣ.
ಮಲ್ಟಿಪ್ಲೆಕ್ಸ್‌ಗಳ ಯುಗದ ಆಗಮನದ ಮುಂಚೆಯೇ, ಬೆಂಗಳೂರಿನಲ್ಲಿ ಸ್ಥಳೀಯ ಭಾಷೆ ಸೇರಿ 6 ಭಾಷೆಗಳಲ್ಲಿ ಚಲನಚಿತ್ರಗಳು ಬಿಡುಗಡೆಯಾಗುತ್ತಿದ್ದವು ಮತ್ತು ಯಶಸ್ವಿ ಆಟಗಳನ್ನು ಕಾಣುತ್ತಿದ್ದವು. ಈಗಲೂ ಸಹ, ಎಲ್ಲಾ ಭಾಷೆಗಳ ಚಲನಚಿತ್ರಗಳು ಏಕ ಪರದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ ಮತ್ತು ಮರಾಠಿ, ಬಂಗಾಳಿ, ಪಂಜಾಬಿಯಂತಹ ಇತರ ಭಾಷೆಗಳ ಚಲನಚಿತ್ರಗಳು ಸಹ ಈಗ ಬಿಡುಗಡೆಯಾಗುತ್ತಿವೆ. ಯಾರೂ ಇದನ್ನು ವಿರೋಧಿಸುವುದಿಲ್ಲ ಮತ್ತು ಪ್ರಶ್ನಿಸುವುದಿಲ್ಲ. ಇದನ್ನು ಕೋಮುವಾದ ಅನ್ನಬೇಕಾ ? ಒತ್ತಡ ಹೇರುತ್ತಿದ್ದಾರೆ ಎಂದು ಹೇಳಬೇಕಾ? ಹೇಗೆ?
ದೇಶದಲ್ಲಿ ಇರುವ ಯಾವುದೇ ಒಂದು ಭಾಷೆ ಹೆಸರನ್ನು ಹೇಳಿ, ತಕ್ಷಣದಲ್ಲೇ ನಿಮ್ಮ ಕೈಯಲ್ಲಿ ಆ ಭಾಷೆಯ ದಿನಪತ್ರಿಕೆ ಬಂದು ಬೀಳುತ್ತದೆ. ಅದು ಕೇವಲ ಬೆಂಗಳೂರು ನಗರದಲ್ಲಿ ಮಾತ್ರ ಸಾಧ್ಯ. ಇದು ಭಾಷಾ ಹೇರಿಕೆಯಾ?
ನೀವು ಬ್ರೋಕರ್ / ಏಜೆಂಟಗಳಿಗೆ ಕರೆ ಮಾಡಿದಾಗ, ನಿಮಗೆ ಯಾವ ಭಾಷೆ ಹಿತಕರ ಅನಿಸುತ್ತದೋ ಅದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಐದರಿಂದ ಆರು ಭಾಷೆಗಳ ಆಯ್ಕೆ ಸಹ ನೀಡುತ್ತಾರೆ. ಇದು ಭಾಷಾ ಒತ್ತಡವೇ ?
ಒಮ್ಮೆ ಆಟೋ / ಕ್ಯಾಬ್ ಹತ್ತಿ ನೋಡಿ, ಚಾಲಕ ಎಲ್ಲಿಗೆ ಹೊಗ್ಬೆಕು? / ಎಕ್ಕಡಾ ಪೊವಾಲಿ? / ಎಂಗೆ ಪೊಗಮ್? / ಕಹಾ ಜಾನಾ ಹೈ ? ಎಂದು ವಿಚಾರಿಸಿ ಗಾಡಿ ಶುರು ಮಾಡುತ್ತಾನೆ. ಅಂತಹ ಸುಂದರವಾದ ಸತ್ಕಾರ ನಿಮಗೆ ಬೇರೆ ಎಲ್ಲಿ ಸಿಗುತ್ತದೆ?
ಒಂದು ಬಸ್ ಹತ್ತಿ, ಕಂಡಕ್ಟರ್ ನಿಮ್ಮ ಭಾಷೆಯಲ್ಲೇ ಮಾತಾಡಿ ಟಿಕೆಟ್ ಕೊಟ್ಟು ಮುಂದೆ ಹೋಗ್ತಾನೆ. ಎಲ್ಲಾದರೂ ನೀವು ಕನ್ನಡ ಮಾತಾಡಿಲ್ಲ ಅಂತ ಟಿಕೆಟ್ ಕೊಡದೆ ಮುಂದೆ ಹೋಗಿದ್ದಾರಾ? ಇಲ್ಲ.
ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಗಳಲ್ಲಿ, ಮಳಿಗೆಗಳಲ್ಲಿ ಎಂದಾದರೂ ಭಾಷೆ ಬರಲ್ಲ ಎಂದು ದೂರ ತಳ್ಳಿದ್ದಾರಾ? ಬದಲಿಗೆ, ನಿಮ್ಮ ಭಾಷೆ ಕಲಿತು ನಿಮ್ಮೊಡನೆ ವ್ಯವಹರಿಸಿದ್ದಾರೆ.
FM ರೇಡಿಯೋಗಳಲ್ಲಿ ಎಲ್ಲಾ ಭಾಷೆಯ ಹಾಡುಗಳು ಪ್ರಸಾರವಾಗುತ್ತವೆ. ಬರಿ ಕನ್ನಡ ಮಾತ್ರವಲ್ಲ.
ನೀವು ದೇವಸ್ಥಾನಕ್ಕೆ ಭೇಟಿ ಕೊಟ್ಟಿರಿ ಅಂದುಕೊಳ್ಳಿ , ಅರ್ಚಕರು ಬಂದು ನಿಮ್ಮ ಗೋತ್ರ, ನಕ್ಷತ್ರ, ರಾಶಿ ಹೇಳಿ / ಆಪ್ಕಾ ಗೋಥರ್, ನಕ್ಷತ್ರ ಬೋಲಿಯೆ / ಮೀ ಗೋತ್ರಮ್, ನಕ್ಷತ್ರ ಚಪ್ಪಂಡಿ / ಉಂಗಾಲ್ ಗೋತ್ರಮ್, ನಾಟ್ಚತ್ರಮ್ ಸೊಲುಂಗ ಎಂದು ಪಂಚ ಭಾಷೆಗಳಲ್ಲಿ ವಿಚಾರಿಸುತ್ತಾರೆ. ದೇವಾಲಯದ ಅರ್ಚಕನೇ ಅನೇಕ ಭಾಷೆಗಳಲ್ಲಿ ಮಾತನಾಡಿ ನಿಮಗೆ ಒಳ್ಳೆಯದಾಗಲಿ ಎಂದು ಹರಿಸುವ ನಮ್ಮ ದೇಶದ ಯಾವುದೇ ಒಂದು ನಗರವನ್ನು ನೀವು ನನಗೆ ಹೇಳಬಲ್ಲಿರಾ, ಇದನ್ನು ಕೋಮುವಾದ ಎಂದು ಕರೆಯಬಹುದೇ?
ಇವು ಕೇವಲ ಕೆಲವೊಂದು ಉದಾಹರಣೆಗಳು. ಹೇಳಲು ಹೋದರೆ ಸಾಕಷ್ಟಿವೆ. ಇರಲಿ ಇದು ಕೊಂಡಾಡುವುದಕ್ಕೆ ಬರೆದ ಲೇಖನವಲ್ಲ. ಮೇಲೆ ಹೇಳಿದ ವಾಕ್ಯಗಳಿಂದ ನಮ್ಮ ಮೇಲೆ ಆಗುತ್ತಿರುವ ಶೋಷಣೆಯ ಲೇಖನ.
ದಕ್ಷಿಣ ಭಾರತದ ಅತ್ಯಂತ ಬಹುಭಾಷಾ ರಾಜ್ಯ ಎಂದರೆ ಅದು ಕರ್ನಾಟಕ.

ನೀವು ಇಂಥಹ ಸುಂದರ ನಗರವನ್ನು / ರಾಜ್ಯವನ್ನು ಕೋಮುವಾದಿ ಎಂದು ಕರೆಯಲು ಬಯಸಿದರೆ, ನಿಮಗೆ ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ಭಾಷಾ ಸ್ನೇಹಿ ನಗರವನ್ನು ಪಡೆಯಲು ಸಾಧ್ಯವಿಲ್ಲಾ ಮತ್ತು ನೀವು ಅರ್ಹರೂ ಅಲ್ಲ.
ಇದು ಗಣರಾಜ್ಯ ಭಾರತ. ಎಲ್ಲರಿಗೂ ಅವರವರ ಶೈಲಿಯಲ್ಲಿ ಬದುಕುವ ಹಕ್ಕಿದೆ. ಆದರೆ ಬೇರೊಬ್ಬರ ನಂಬಿಕೆಗಳ, ಆಸಕ್ತಿಗಳ ಗೋರಿಗಳ ಮೇಲೆ ಅಲ್ಲ. ಬೆಂಗಳೂರಿಗೆ ಬರುವ ಜನರು ನಮ್ಮ ಸಮಾಜದಲ್ಲಿ ಬೆರೆಯಬೇಕು ಮತ್ತು ಪ್ರತ್ಯೇಕವಾಗಿರುವುದರ ಬದಲು ನಮ್ಮಲ್ಲಿ ಒಬ್ಬರಾಗಬೇಕು ಮತ್ತು ತಮ್ಮದೇ ಆದ ಜೀವನ ಶೈಲಿಯಲ್ಲಿ ಬದುಕಬೇಕು ಎಂದು ನಾನು ಬಯಸುತ್ತೇನೆ.
ದಯವಿಟ್ಟು ನೆನಪಿಡಿ, ಕನ್ನಡಿಗರು ಭಾಷಾ ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದಾರೆ, ಆದರೆ ಅದಕ್ಕೂ ಒಂದು ಮಿತಿ ಇದೆ. ನಗರಕ್ಕೆ ಬರುವ ವ್ಯಕ್ತಿಯು ನಮ್ಮ ಮಿತಿಯನ್ನು ದಾಟುವ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ಸ್ವಾಭಾವಿಕವಾಗಿ ನಾವು ನಮ್ಮ ಅಭಿಮಾನವನ್ನು ತೋರಿಸಬೇಕಾಗುತ್ತದೆ. ಆಗ ಒತ್ತಡ , ಸಹಿಷ್ಣುತೆ ಅನ್ನೋ ದೊಂಬಿಯನ್ನು ಎಬ್ಬಿಸಬೇಡಿ.
ಈ ನಾಡು ನಮ್ಮದು. ಇಲ್ಲಿ ಹೇಗೆ ಬದುಕಬೇಕು ಏನನ್ನು ಪಾಲಿಸಬೇಕು ಎಂಬುದನ್ನು ನಿಮ್ಮಿಂದ ಕಲಿಯುವ ಅವಶ್ಯಕತೆ ನಮಗಿಲ್ಲ. ಇಲ್ಲಿರುವ ಎಷ್ಟೋ ವಲಸಿಗರು ಬಂದು ಇಲ್ಲೇ ನೆಲೆ ಕಂಡುಕೊಂಡಿದ್ದಾರೆ. ಕಾರಣ ಹಲವು ಇರಬಹುದು. ಆದರೆ ಅವರ ಸ್ವಂತ ನಾಡಿನಲ್ಲಿ ಇಷ್ಟು ಸ್ವಾತಂತ್ರ, ಸಹಿಷ್ಣುತೆ ಅವರು ಕಂಡಿರಲಿಕ್ಕಿಲ್ಲ.
ನಮ್ಮ ಕೋರಿಕೆ ಒಂದೆ. ಬನ್ನಿ, ಇರಿ, ಬೆರೆಯಿರಿ. ಆದರೆ ನಮ್ಮ ಅಭಿಮಾನಕ್ಕೆ ಧಕ್ಕೆ ತಂದು, ನಮಗೆ ಎರಡು ಬಗೆದರೆ ನಾವು ಖಂಡಿತ ಸುಮ್ಮನಿರುವುದಿಲ್ಲ. ನಿಮಗೆ ನಮ್ಮ ಭಾಷೆಯಂತೆ ಸ್ವಂತ ನುಡಿ ತಾಯಿ ಇರದೇ ಇರಬಹುದು. ಆದರೆ ನಮಗಿದೆ. ಕನ್ನಡ ನಮ್ಮ ಅಭಿಮಾನ. ದೇಶದಲ್ಲಿನ ಅತ್ಯಂತ ಪ್ರಾಚೀನ ಭಾಷೆ. ಎಂಟು ಜ್ಞಾನಪೀಠ ಪುರಸ್ಕೃತ ಭಾಷೆ. ಲಿಪಿಗಳ ರಾಣಿ ನಮ್ಮ ಭಾಷೆ. ನಿಮಗೆ ನಿಮ್ಮ ಭಾಷಾಭಿಮಾನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ಭಾಷೆ.
ಸಹಿಷ್ಣುಗಳು ಎಂದು ಕಡೆಗಣಿಸಿ ನಮ್ಮ ಮೇಲೆಯೇ ಸವಾರಿ ಮಾಡುವ ಎಂದು ಕೊಂಡಿದ್ದರೆ. ಅದು ತಪ್ಪು. ತಾಳ್ಮೆಗೆ ಮತ್ತು ಆತ್ಮಾಭಿಮಾನಕ್ಕೆ ನಾವು ಎಂದು ಬಗ್ಗುವುದಿಲ್ಲ.
ಸಿರಿಗನ್ನಡಂ ಗೆಲ್ಗೆ । ಸಿರಿಗನ್ನಡಂ ಬಾಳ್ಗೆ.






Comments